ಫುಟ್, ರಾಬರ್ಟ್ ಬ್ರೂಸ್  
1834-1912. ಇಂಗ್ಲೆಂಡಿನಲ್ಲಿ ಜನಿಸಿ ಭಾರತದಲ್ಲಿ ಕೆಲಸ ಮಾಡಿದ ಭೂವಿಜ್ಞಾನಿ. ಜನನ 1834, ಮರಣ 29-12-1912. ದಕ್ಷಿಣ ಭಾರತದ ಆರ್ಷೇಯ ಶಿಲಾವರ್ಗಗಳನ್ನು ಪರೀಕ್ಷಿಸಿ ನಕ್ಷೆಗೊಳಿಸುವ ಆರಂಭದ ಕೆಲಸವನ್ನು ಕೈಗೊಂಡ ಹೆಸರಾಂತ ಭೂವಿಜ್ಞಾನಿ. ಪ್ರಾರಂಭಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಪಡೆದ ಬಳಿಕ, 1858ರಲ್ಲಿ, ಆಗತಾನೇ ಸ್ಥಾಪಿತವಾಗಿದ್ದ ಭಾರತ ಸರ್ಕಾರದ ಭೂವಿಜ್ಞಾನ ಮೋಜಣಿ ಸಮೀಕ್ಷಾಸಂಸ್ಥೆಯನ್ನು ಸಹಾಯಕ ಸೂಪರಿನ್‍ಟೆಂಡೆಂಟ್ ಆಗಿ ಸೇರಿದರು. ಆ ಶಾಖೆಯಲ್ಲಿ ಮೂವತ್ತಮೂರು ವರ್ಷಗಳಿಗೆ ಕೊಂಚ ಮೇಲ್ಪಟ್ಟು ಸೇವೆ ಸಲ್ಲಿಸಿ 1891ರಲ್ಲಿ ಹಿರಿಯ ಸೂಪರಿನ್‍ಟೆಂಡೆಂಟ್ ಪದವಿಯಿಂದ ನಿವೃತ್ತರಾದರು. ಈ ದೀರ್ಘ ಕಾಲದ ಹುದ್ದೆಯಲ್ಲಿ ಎರಡು ಬಾರಿ ಆ ಸಂಸ್ಥೆಯ ಹಂಗಾಮಿ ಡೈರೆಕ್ಟರ್ ಕೂಡ ಆಗಿದ್ದರು.

	ಇವರ ಸೇವಾವಧಿಯ ಹೆಚ್ಚಿನ ಭಾಗ ದಕ್ಷಿಣ ಭಾರತದಲ್ಲಿತ್ತು. ಮುನ್ನಿನ ಮದರಾಸು ಪ್ರಾಂತ್ಯದ ಹೆಚ್ಚು ಕಡಿಮೆ ಸಂಪೂರ್ಣ ಪ್ರದೇಶ ಮತ್ತು ಬೊಂಬಾಯಿ ಪ್ರಾಂತ್ಯದ ವಾಯವ್ಯ ಭಾಗ ಇಲ್ಲಿಯ ಶಿಲಾವರ್ಗಗಳನ್ನು ಪರಿಶೋಧಿಸಿ ನಕ್ಷೆ ಮಾಡಿ, ಅವುಗಳ ವಿವರಣೆಯನ್ನು ಸಹೋದ್ಯೋಗಿ ಕಿಂಗ್ ಎಂಬವರೊಂದಿಗೆ ಪ್ರಕಟಿಸಿದರು. ಭಾರತ ದ್ವೀಪಕಲ್ಪದ ಆರ್ಷೇಯ ಶಿಲಾವರ್ಗಗಳ ಜನ್ಮಚರಿತ್ರೆಯ ತೊಡಕುಗಳನ್ನು ಬಿಡಿಸಿ ಪ್ರಸ್ತರೀ ವಿವರಣವಿಜ್ಞಾನ ಮತ್ತು ಪ್ರಾಚೀನ ಜೀವ್ಯವಶೇಷವಿಜ್ಞಾನಗಳ ಸಂಶೋಧನೆಯಲ್ಲಿಯೂ ಭಾರತದ ಪ್ರಾಕ್ಕಾಲೀನ ಶಿಲೋಪಕರಣಗಳ ಲಕ್ಷಣ ಮತ್ತು ಹಂಚಿಕೆಗಳ ಸಂಶೋಧನೆಯಲ್ಲಿಯೂ ಫುಟ್ ಭಾಗಿಗಳಾಗಿದ್ದರು.

	ದಕ್ಷಿಣ ಭಾರತದ ಸ್ಫಟಿಕಾಕೃತಿಯ ಶಿಲಾಸಂಯೋಜನೆಯಲ್ಲಿ ಗ್ರಾನಿಟಾಯ್ಡ್ ನೈಸುಗಳಿಂದ ಧಾರವಾಡ ಶಿಲಾವರ್ಗವನ್ನು ಮೊತ್ತಮೊದಲು ಬೇರ್ಪಡಿಸಿದವರು ಇವರು. ಪ್ರಾಚೀನ ಜೀವ್ಯವಶೇಷವಿಜ್ಞಾನಸಂಶೋಧನೆಯಲ್ಲಿ ಇವರು ಕರ್ನೂಲು ಗುಹೆಗಳ ಆಂತರ್ಯಗಳನ್ನು ಸಂಶೋಧಿಸಿ ಪ್ಲೀಸ್ಟೊಸೀನ್ ಕಾಲದ ಅನೇಕಾನೇಕ ಸ್ತನಿಗಳ ಅವಶೇಷಗಳನ್ನು ಹೊರತೆಗೆದು ಪರಿಶೋಧಿಸಿದುದರಲ್ಲಿ ಆ ಪ್ರಾಣಿಗಳಲ್ಲಿ ಅನೇಕವು ಈಗ ನಿರ್ಮೂಲವಾಗಿರುವುದಾಗಿ ತಿಳಿಯಿತು. ಪ್ಲೀಸ್ಟೊಸೀನ್ ಕಾಲದಲ್ಲಿ ಭಾರತದಲ್ಲಿದ್ದ ಪ್ರಾಣಿವರ್ಗಗಳಲ್ಲಿ ಒಂದು ಹೊಸಬಗೆಯ ಖಡ್ಗಮೃಗದ (ಘೇಂಡಾಮೃಗ) ಅವಶೇಷಗಳನ್ನು ಬೆಳಗಾಮಿ ಜಿಲ್ಲೆಯ ಕರಿಯ ಮಣ್ಣಿನಿಂದ ಹೊರತೆಗೆದು ಅದರ ವಿವರಣೆ ಕೊಟ್ಟು ಅದಕ್ಕೆ ರ್ಹೈನೊಸೆರಸ್ ಡೆಕ್ಕನ್‍ನ್ಸಿಸ್ ಎಂಬ ನಾಮಾಂಕಿತವನ್ನಿತ್ತರು. ಇದು ಪ್ಲೀಸ್ಟೊಸೀನ್ ಕಾಲದಲ್ಲಿ ಭಾರತದಲ್ಲಿದ್ದ ಪ್ರಾಣಿವರ್ಗದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿದೆ. ಈ ಸಂಶೋಧನೆಯ ಜೊತೆಗೆ ಕರಿಯ ಹತ್ತಿ ಮಣ್ಣಿನ ಉತ್ಪತ್ತಿ ವಿಧಾನವನ್ನೂ ಅವರು ಸಂಶೋಧಿಸಿದರು. ಭಾರತ ಭೂವಿಜ್ಞಾನ ಮೋಜಣಿ ಇಲಾಖೆಯ ರಿಕಾಡ್ರ್ಸ್ ಮತ್ತು ಮೆಮಾಯ್ರುಗಳಲ್ಲಿ ಪ್ರಕಟವಾಗಿರುವ ಫುಟ್ ಅವರ ಅನೇಕ ವಿಮರ್ಶಾತ್ಮಕ ಮತ್ತು ವಿವರಣಾತ್ಮಕ ಲೇಖನಗಳು ಅವರ ವಿಜ್ಞಾನ ಸಂಶೋಧನ ಚಟುವಟಿಕೆಯ ಔನ್ನತ್ಯವನ್ನು ತೋರಿಸುತ್ತವೆ.

	ಭಾರತ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಯಲ್ಲಿಯ ಹುದ್ದೆಯಿಂದ ನಿವೃತ್ತರಾದ ಬಳಿಕ ಫುಟ್ ಬರೋಡದಲ್ಲಿ ಮೂರು ವರ್ಷಗಳಿದ್ದು ಅನಂತರ ಆ ಭಾಗದ ಶಿಲಾ ವರ್ಗ ಮತ್ತು ಖನಿಜ ಭಾಂಡಾರಗಳನ್ನು ವಿವರಿಸುವ ಗ್ರಂಥವೊಂದನ್ನು ಪ್ರಕಟಿಸಿದರು. 1894ರ ಕೊನೆಯಲ್ಲಿ ಅಂದಿನ ಮೈಸೂರು ಸರ್ಕಾರದಿಂದ ಸಂಸ್ಥಾನ ಭೂವಿಜ್ಞಾನಿ ಆಗಿ ನೇಮಕಗೊಂಡರು. ಆಗ ಇವರು ಸಂಸ್ಥಾನದ ಭೂವಿಜ್ಞಾನ ಇಲಾಖೆಯನ್ನು ಸ್ಥಾಪಿಸಿ ಅದರ ಕೆಲಸ ದಕ್ಷವಾಗಿ ಮುನ್ನಡೆಯಲು ಯೋಗ್ಯ ಬುನಾದಿ ಹಾಕಿದರು. ಮೈಸೂರು ಸರ್ಕಾರದ ಈ ಹುದ್ದೆಯಿಂದ 1897ರಲ್ಲಿ ನಿವೃತ್ತರಾದ ಬಳಿಕ ಕೊಂಚ ಕಾಲ ಸೇಲಮ್ ಬಳಿ ಷೇವರಾಯ್ ಬೆಟ್ಟಸಾಲಿನಲ್ಲ್ಲಿರುವ ಯರಕಾಡ್‍ನಲ್ಲಿ ವಾಸಿಸುತ್ತಲಿದ್ದು ಅನಂತರ ಕಲ್ಕತ್ತೆಗೆ ತೆರಳಿ ಅಲ್ಲಿ ಮೃತರಾದರು
(ಬಿ.ಆರ್.ಆರ್.ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ